ಕೀರ್ತಿವರ್ಮ 2

 (ಬಾದಾಮಿ ಚಾಳುಕ್ಯ) : ಇಮ್ಮಡಿ ವಿಕ್ರಮಾದಿತ್ಯನ ಮಗ ; ಅವನ ಉತ್ತರಾಧಿಕಾರಿ ; ಮತ್ತು ಬಾದಾಮಿ ಚಾಳುಕ್ಯ ಮನೆತನದ ಕೊನೆಯ ದೊರೆ (745-757). ಚಿಕ್ಕವಯಸ್ಸಿನಲ್ಲೇ ಯುದ್ಧಕಲೆಯಲ್ಲಿ ಪರಿಣತಿ ಪಡೆದಿದ್ದ. ವಿಕ್ರಮಾದಿತ್ಯ ಈತನಿಗೆ ಯುವರಾಜಪಟ್ಟವನ್ನು ಕಟ್ಟಿದ್ದ. ಇವನಿಗೆ ಶ್ರೀಪೃಥ್ವೀವಲ್ಲಭ, ಪರಮೇಶ್ವರ, ಮಹಾರಾಜಾಧಿರಾಜ ಮತ್ತು ನೃಪಸಿಂಹ ಎಂಬ ಬಿರುದುಗಳಿದ್ದುವು. ಯುವರಾಜನಾಗಿದ್ದಾಗ ಕಂಚಿಯ ಮೇಲೆ ದಂಡೆತ್ತಿ ಹೋಗಿ ಪಲ್ಲವ ರಾಜನನ್ನು ಸೋಲಿಸಿ ವಿಪುಲವಾದ ಐಶ್ವರ್ಯವನ್ನು ಅನೇಕ ಆನೆಗಳನ್ನೂ ಅವನಿಂದ ಪಡೆದು ತಂದು ತನ್ನ ತಂದೆಗೆ ಅರ್ಪಿಸಿದ. ಈತ ರಾಜನಾಗುವ ವೇಳೆಗೆ ರಾಷ್ಟ್ರಕೂಟ ದಂತಿದುರ್ಗ ಪ್ರಬಲನಾಗಿದ್ದ. ಆತ ಕೀರ್ತಿವರ್ಮನನ್ನು ಸೋಲಿಸಿದುದಾಗಿ ಸಾಮನ್ ಘಡ ಶಾಸನ ತಿಳಿಸುತ್ತದೆ. 757ರಲ್ಲಿ ಇಮ್ಮಡಿ ಕೀರ್ತಿವರ್ಮ ಗತಿಸಿದಾಗ ಬಾದಾಮಿ ಚಾಳುಕ್ಯ ಸಾಮ್ರಾಜ್ಯವೂ ಅವನೊಂದಿಗೆ ಕಣ್ಮರೆಯಾಯಿತು.   

(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ